12 April 2009

ಸರೋದ್ ಸಾಧಕ ಅಮ್ಜದ್ ಅಲಿ ಖಾನ್

ರಾಮಸೇವಾ ಮಂಡಳಿಯಂದ ಇಂದು ಪದ್ಮವಿಭೂಷಣ ಉಸ್ತಾದ್ ಅಮ್ಜದ್ ಅಲಿ ಖಾನ್ ಅವರ ಸರೋದ್ ವಾದನ ಕಛೇರಿ ನಡೆಯಿತು. ತಬ್ಲಾದಲ್ಲಿ ಪೂನಾದ ಪಂಡಿತ್ ವಿಜಯ್ ಘಾಟೆ ಸಾಥ್ ನೀಡಿದರು. ಮೊತ್ತ ಮೊದಲು ಉಸ್ತಾದರು ಈಮನಿ ಶಂಕರ ಶಾಸ್ತ್ರಿಗಳ ಜೊತೆ ಇಲ್ಲಿ ಬಂದು ಜುಗಲ್ ಬಂದಿ ನಡೆಸಿಕೊಟ್ಟಿದ್ದರಂತೆ.

ಪಿಟೀಲು, ಸಿತಾರ್, ವೀಣೆ ನುಡಿಸುವಾಗ ಎಡಗೈ ಬೆರಳಿನ ತುದಿಗಳನ್ನು ಉಪಯೋಗಿಸುತ್ತಾರೆ. ಆದರೆ ಸರೋದ್ ನಲ್ಲಿ ಎಡಗೈ ಉಗುರಿನ ತುದಿಗಳನ್ನು ಉಪಯೋಗಿಸುತ್ತಾರೆ. ಬೆರಳಿನ ತುದಿಗಳನ್ನು ಉಪಯೋಗಿ ನುಡಿಸಿದರೆ ಬೇರೆ ಶಬ್ದ ಬರುತ್ತೆ. ಇದನ್ನು ಉಸ್ತಾದರು ಮಾಡಿ ತೋರಿಸಿದರು. ಉಗುರಿನ ತುದಿಗಳನ್ನು ಉಪಯೋಗಿಸುವುದರಿಂದ ಅವುಗಳಲ್ಲಿ ಗೀರು(ಸಂದುಗೆರೆ) ಆಗುತ್ತವೆ. ಆದ್ದರಿಂದ ಮಧ್ಯೆ ಮಧ್ಯೆ ಉಗುರುಗಳನ್ನು ಸಣ್ಣ ಅರದಿಂದ ಉಜ್ಜಿ ಸರಿಪಡಿಸುತ್ತಿದ್ದರು.

ಚಿತ್ರ : ಪಂಡಿತ್ ವಿಜಯ್ ಘಾಟೆ ಮತ್ತು ಪದ್ಮವಿಭೂಷಣ ಉಸ್ತಾದ್ ಅಮ್ಜದ್ ಅಲಿ ಖಾನ್

ಚಿತ್ರ : ಪದ್ಮವಿಭೂಷಣ ಉಸ್ತಾದ್ ಅಮ್ಜದ್ ಅಲಿ ಖಾನ್

ಚಿತ್ರ : ಪಂಡಿತ್ ವಿಜಯ್ ಘಾಟೆ

ವೇದಿಕೆ ಮೇಲೆ ಬಿಟ್ಟು ಉಳಿದೆಲ್ಲಾ ವಿದ್ಯುದ್ದೀಪಗಳನ್ನು ಆರಿಸಿ ಕಛೇರಿ ಕೇಳಲು ಒಂದು ಒಳ್ಳೆಯ ವಾತಾವರಣನನ್ನು ಸೃಷ್ಟಿಸಿದ್ದರು. ಜೊತೆಗೆ ವಿದ್ಯುತ್ ಉಳಿತಾಯವೂ ಆಯಿತು.

ಇಬ್ಬರೂ ಕಲಾವಿದರು ಅತ್ಯುತ್ತಮವಾಗಿ ನುಡಿಸಿ ಸಭಿಕರಿಗೆ ಒಳ್ಳೆಯ ಮನರಂಜನೆ ಒದಗಿಸಿದರು.

ಅವರು ನುಡಿಸಿದ ರಾಗಗಳು/ರಚನೆಗಳು :
೧. ರಾಗ ಕಮಲಶ್ರೀ

೨. ರಾಗ ಖಮಾಜ್ - ವೈಷ್ಣವ ಜನತೊ - ನರಸಿಂಹ ಮೆಹ್ತಾರ ರಚನೆ

೩. ರಘುಪತಿ ರಾಘವ ರಾಜಾರಾಂ - ವಿಷ್ಣುದಿಗಂಬರ್ ಪಲುಸ್ಕಾರ್ ರವರ ರಚನೆ

೪. ರಾಗ ದರ್ಬಾರಿ ಕಾನಡ (ತಾನ್ ಸೇನ್ ರಚಿಸಿದ ರಾಗ)

೫. ತಬ್ಲಾ ಸೋಲೋ (ತನಿ)

೬. ರಾಗ ಶುಭಲಕ್ಷ್ಮೀ

೭. ಜನಪದ ಗೀತೆ - ರಬೀಂದ್ರನಾಥ ಟ್ಯಾಗೋರ್ ರವರ ರಚನೆ

|| ಶುಭಂ ||


Tags : 71st Ramanavami Music Festival, April-May 2009, Kote High School Grounds, Sri Ramaseva Mandali Chamarajpet Bangalore, Hindustani Classical Music, Sarod recital, Ustad Amjad Ali Khan, Pt Vijay Ghate

05 April 2009

ಏಸುದಾಸ್ ಕಛೇರಿ

ಕೋಟೆ ಪ್ರೌಢಶಾಲಾ ಮೈದಾನದಲ್ಲಿ ಇಂದು ಸಂಜೆ ಇದ್ದುದು ಡಾ| ಕೆ. ಜೆ. ಏಸುದಾಸ್ ರವರ ಕಛೇರಿ. ಜತೆಗೆ ಹಿಮ್ಮೇಳದಲ್ಲಿ ಪಿಟೀಲಿನಲ್ಲಿ ವಿದ್ವಾನ್ ನಾಗೈ ಮುರಳೀಧರನ್, ಮೃದಂದಗಲ್ಲಿ ವಿದ್ವಾನ್ ತಿರುವಾರೂರು ಭಕ್ತವತ್ಸಲಂ, ಘಟಂನಲ್ಲಿ ವಿದ್ವಾನ್ ವೈಕೋಂ ಗೋಪಾಲಕೃಷ್ಣನ್.

ಕಾರ್ಯಕ್ರಮದ ನಿರೂಪಕರು ಏಸುದಾಸ್ ಇತ್ತೀಚೆಗೆ ತಾತ ಆದ ವಿಚಾರವನ್ನು ಹಂಚಿಕೊಂಡರು. ಮುಂಚೆ ಇವರ ಗುರುಗಳಾದ ಚೆಂಬೈ ವೈದ್ಯನಾಥ ಭಾಗವತರ ಕಛೇರಿ ಖಾತ್ರಿ ಮಾಡಿದ ನಂತರ ಸಂಗೀತೋತ್ಸವದ ಇತರ ಕೆಲಸ ಶುರು ಮಾಡ್ತಾ ಇದ್ರಂತೆ. ಈಗ ಏಸುದಾಸರ ಕಛೇರಿ ಮೊದಲು ಗೊತ್ತು ಮಾಡುತ್ತಾರಂತೆ.

ಸಂಜೆ ೬-೩೦ಕ್ಕೆ ಆರಂಭವಾಗಬೇಗಿದ್ದ ಕಛೇರಿ ಶುರುವಾಗಿದ್ದು ೭ ಘಂಟೆಗೆ, ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಹಾಗೂ ಸಂಸದ ಅನಂತಕುಮಾರ್ ರವರು ಕಲಾವಿದರನ್ನು ಅಭಿನಂದಿಸಿದ ನಂತರ. "ಸರಸಾಂಗಿ" ವರ್ಣದಿಂದ ಆರಂಭಿಸಿದ ಏಸುದಾಸರು ೨-೩ ಕೃತಿಗಳ ನಂತರ ಸಭಿಕರ ಬೇಡಿಕೆಯ ಮೇರೆಗೆ "ಎಂದರೋ ಮಹಾನುಭಾವುಲು" ಎತ್ತಿಕೊಂಡರು. ಶ್ರೀರಾಗದಲ್ಲಿರುವ ತ್ಯಾಗರಾಜರ ಪಂಚರತ್ನ ಕೀರ್ತನೆಗಳಲ್ಲಿ ಒಂದಾದ ಇದನ್ನು ನಿಧಾನಗತಿಯಲ್ಲಿ ಸೊಗಸಾಗಿ ಹಾಡಿದರು. ಹಾಗೇ "ಪರಿಯಾಚಕಮಾ"ವನ್ನು ವನಸ್ಪತಿ ರಾಗದಲ್ಲಿ ಹಾಡಿದರು. ಅವರ ಮೆಚ್ಚಿನ ರಾಗ ಕಲ್ಯಾಣಿಯಲ್ಲಿ ಆಲಾಪನೆ ಮಾಡಿ "ಇನ್ನು ದಯ ಬಾರದೆ ದಾಸನ ಮೇಲೆ" ಹಾಡಿದರು.

ಚಿತ್ರ : ಎಡದಿಂದ ವಿದ್ವಾನ್ ತಿರುವಾರೂರು ಭಕ್ತವತ್ಸಲಂ, ವಿದ್ವಾನ್ ವೈಕೋಂ ಗೋಪಾಲಕೃಷ್ಣನ್, ಡಾ| ಕೆ. ಜೆ. ಏಸುದಾಸ್, ವಿದ್ವಾನ್ ನಾಗೈ ಮುರಳೀಧರನ್


ಚಿತ್ರ : ಡಾ| ಕೆ. ಜೆ. ಏಸುದಾಸ್

ಚಿತ್ರ : ವಿದ್ವಾನ್ ತಿರುವಾರೂರು ಭಕ್ತವತ್ಸಲಂ

ಏಸುದಾಸ್ ಕಛೇರಿ ಮಧ್ಯೆ ಅಲ್ಲಿ-ಇಲ್ಲಿ ಮಾತಾಡೋದು ಸಾಮಾನ್ಯ. ಅವರ ಮಾತಿನ ಕೆಲವು ತುಣುಕುಗಳು -
I have become grand father, but I am not grand in Music.

Turn your face to right while singing base/lower notes. Turn your face to left while singing higher notes.

Use "da" in alapana for base notes. Use "na" in alapana in higher notes.

I am following it, so I am advising it to you. If it is not good I will not advise.

Kanakangi 1st melakarta raga. I have practiced it for 3-4 years before performing on stage. People were telling me "why are you trying that difficult raga?". Then I told "Why ancestors kept that raga? Why Thyagaraja composed a krithi in that raga?".

Learn with dedication. Always think about your work. Then only you can do good. Lakshmi is tricky & hidden, but Saraswathi will be always there.

Gamaka is very essential in Carnatic Music, but unnecessary gamaka should not be used.

ಸಭಿಕರ ಬೇಡಿಕೆಗಳು ಸಾಕಷ್ಟಿದ್ದವು. ಆದರೆ " ಅಲೈಪಾಯುದೆ", "ಕೃಷ್ಣಾ ನೀ ಬೇಗನೇ ಬಾರೋ", " ಹರಿವರಾಸನಂ" ಹಾಡಿ ೧೦-೨೦ ಘಂಟೆಗೆ ಕಛೇರಿ ಮುಕ್ತಾಯಗೊಳಿಸಿದರು. ಮುಂಬರುವ ಮಹಾ ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತ ಚಲಾಯಿಸಲು ಕರೆ ಕೊಟ್ಟರು.

ಅವರು ಹಾಡಿದ ಕೃತಿಗಳು:
೧. ಸರಸಾಂಗಿ - ವರ್ಣ - ಆದಿ
೨. ಓಂಕಾರ ಪುರುಳೇ - ಭವಾಭರಣಂ(ಹಂಸ ವಿನೋದಿನಿ) ರಾಗ
೩. ಗುರುವಿನ ಯಾಕೆ ಮರೆಯುವಿರಣ್ಣಾ - ವಂದನಧಾರಿಣಿ ರಾಗ
೪. ಹರಿಯದಾಸರಿಗೆ ಸರಿಯುಂಟೆ ಹರಿಯ ನಂಬಿದವರಿಗೆ ಕೇಡುಂಟೆ - ಪುರಂದರದಾಸ
೫. ಎಂದರೋ ಮಹಾನುಭಾವುಲು - ಶ್ರೀರಾಗ - ಆದಿ - ತ್ಯಾಗರಾಜರು
೬. ನಿನ್ನ ನೋಡಿ ಧನ್ಯನಾದೆನೊ ಹೇ ಶ್ರೀನಿವಾಸ
೭. ಕ್ಷೀರಸಾಗರ ಶಯನ - ದೇವಗಾಂಧಾರಿ - ತ್ಯಾಗರಾಜರು
೮. ಪರಿಯಾಚಕಮಾ - ವನಸ್ಪತಿ - ರೂಪಕ - ತ್ಯಾಗರಾಜರು
೯. ಇನ್ನು ದಯ ಬಾರದೆ ದಾಸನ ಮೇಲೆ - ಕಲ್ಯಾಣಿ
೧೦. ಏನು ವರವ ಬೇಡಲಿ ನಾನು ಮನವರಿತು ನೀಡು ಶಬರೀಶ್ವರನೆ
೧೧. ಕೊಟ್ಟ ಭಾಗ್ಯವೆ ಸಾಕೋ
೧೨. ರಂಗ ಬಾರೋ ಪಾಂಡುರಂಗ ಬಾರೋ
೧೩. ಅಲೈಪಾಯುದೆ - ಕಾನಡ - ಆದಿ - ಉತ್ತುಕ್ಕಾಡು ವೆಂಕಟ ಸುಬ್ಬಯ್ಯರ್
೧೪. ಕೃಷ್ಣಾ ನೀ ಬೇಗನೇ ಬಾರೋ - ಯಮನ್ ಕಲ್ಯಾಣಿ - ಛಾಪು - ವ್ಯಾಸರಾಯರು
೧೫. ಎಲ್ಲೆಲ್ಲು ಸಂಗೀತವೇ (ಕನ್ನಡ ಚಿತ್ರ "ಮಲಯಮಾರುತ"ದಿಂದ)
೧೬. ಹರಿವರಾಸನಂ
೧೭. ಪವಮಾನ

|| ಶುಭಂ ||


Tags : 71st Ramanavami Music Festival, April-May 2009, Kote High School Grounds, Sri Ramaseva Mandali Chamarajpet Bangalore, Carnatic Classical Music, Dr K J Yesudas, Vid. Nagai Muralidharan, Vid. Tiruvarur Bhaktavatsalam, Vid. Vaikom Gopalakrishnan

ಪಿಳ್ಳಂಗೋವಿಯ ವಿದ್ಯಾಭೂಷಣ


ಸಂಗೀತ ವಿದ್ಯಾನಿಧಿ ವಿದ್ಯಾಭೂಷಣ ಅವರ ಸಂಗೀತವನ್ನು ಮತ್ತೆ ಕೇಳುವ ಅವಕಾಶ ಒದಗಿ ಬಂದದ್ದು ನಿನ್ನೆ ಶಂಕರಪುರದಲ್ಲಿ. ಅಲ್ಲಿನ ಶ್ರೀ ರಾಮಸೇವಾ ಮಂಡಳಿಯವರು ೫೦ನೇ ವರ್ಷದ ಶ್ರೀ ರಾಮನವಮಿ ಸಂಗೀತೋತ್ಸವವನ್ನು ನಡೆಸುತ್ತಿದ್ದಾರೆ. ನಾನು ವಿದ್ಯಾಭೂಷಣರ ಸಂಗೀತವನ್ನು ತುಂಬಾ ಸಲ ಕೇಳಿದ್ದರೂ ನಿನ್ನೆ ಒಂದು ವಿಶೇಷತೆ ಇತ್ತು. ಅಲ್ಲಿ ಮೃದಂಗದಲ್ಲಿ ಸಹಕಾರ ನೀಡಿದವರು ಮತ್ತಾರೂ ಅಲ್ಲ, ಅವರ ಗುರುಗಳಾದ ಟಿ. ವಿ. ಗೋಪಾಲಕೃಷ್ಣನ್. ಪಿಟೀಲಿನಲ್ಲಿ ಎಂದಿನಂತೆ ಎಂ. ಎಸ್. ಗೋವಿಂದಸ್ವಾಮಿ ಮತ್ತು ಮೋರ್ಸಿಂಗ್ ನಲ್ಲಿ ಬಾಲಕೃಷ್ಣ ಅವರಿದ್ದರು. ಕಾರ್ಯಕ್ರಮ ಪಟ್ಟಿಯಲ್ಲಿ ಭಕ್ತಿ ಸಂಗೀತ ಅಂತ ಇತ್ತು. ಆದರೆ ವಿದ್ಯಾಭೂಷಣರು ಹೆಚ್ಚಿನ ಕೃತಿಗಳಿಗೆ ಆಲಾಪನೆ ಮತ್ತು ಸ್ವರ ಪ್ರಸ್ತಾರ ಹಾಕಿದ್ದರು. ಮುಖ್ಯವಾಗಿ ಅಭೇರಿ ರಾಗವನ್ನು ವಿಸ್ತೃತವಾಗಿ ಆಲಾಪನೆ ಮಾಡಿ, ತ್ಯಾಗರಾಜರ ಕೃತಿ "ನಗುಮೋಮು" ಹಾಡಿದರು. ಆದ್ದರಿಂದ ಇದು ಒಂದು ಪೂರ್ಣ ಪ್ರಮಾಣದ ಶಾಸ್ತ್ರೀಯ ಸಂಗೀತ ಕಛೇರಿ ಅಂತ ಅನ್ನಿಸಿತು.

ಚಿತ್ರ : ಎಡದಿಂದ ಟಿ. ವಿ. ಗೋಪಾಲಕೃಷ್ಣನ್, ಬಾಲಕೃಷ್ಣ , ವಿದ್ಯಾಭೂಷಣ, ಎಂ. ಎಸ್. ಗೋವಿಂದಸ್ವಾಮಿ

ಕಛೇರಿ ಹೇಗಿತ್ತು ಅಂತ ಹೇಳುವ ಅವಶ್ಯಕತೆ ಇಲ್ಲವೇನೋ. ಇಂಥಾ ಸಂಗೀತ ದಿಗ್ಗಜರು ವೇದಿಕೆ ಮೇಲೆ ಇರೋವಾಗ ಹೇಗಿತ್ತು ಅಂತ ನೀವೇ ಊಹಿಸಬಹುದು. ವಿದ್ಯಾಭೂಷಣರ ಗಾನ ಮಾಧುರ್ಯತೆಗೆ ಮನ ಸೋಲದವರು ಯಾರೂ ಇಲ್ಲ. ತನಿ ಆವರ್ತನಕ್ಕೆ ಪ್ರೇಕ್ಷಕರ ಕರತಾಡನವನ್ನು ಕೇಳಿ ಟಿವಿಜಿ ಹೀಗೆ ಉದ್ಗರಿಸಿದರು "ನನ್ನದೇನೂ ಇಲ್ಲ, ಎಲ್ಲಾ ಇವರದ್ದು(ವಿದ್ಯಾಭೂಷಣ), ಅವರು ಇಷ್ಟು ಭಕ್ತಿ-ಭಾವ ಪರವಶರಾಗಿ ಹಾಡೋದ್ರಿಂದ ನಾನು ಹೀಗೆ ನುಡಿಸಲು ಸಾಧ್ಯವಾಗುತ್ತೆ, I am 76, but when I play with him, I feel like 36".

ಇನ್ನು ಮೋಹನ ರಾಗದಲ್ಲಿ ಪುರಂದರ ದಾಸರ ಕೀರ್ತನೆ "ಪಿಳ್ಳಂಗೋವಿಯ ಚೆಲ್ವ ಕೃಷ್ಣನ" ಹಾಡದೇ ವಿದ್ಯಾಭೂಷಣರ ಕಛೇರಿ ಪೂರ್ಣಗೊಳ್ಳುವುದೇ ? ಖಂಡಿತಾ ಇಲ್ಲ. ಅದನ್ನೂ ಹಾಡಿ ಸಂಗೀತ ಕಲಾಭಿಮಾನಿಗಳನ್ನು ರಂಜಿಸಿದರು. ನಾನೂ ಮೊದ ಮೊದಲು ವಿದ್ಯಾಭೂಷಣರನ್ನು ಕೇಳಿದ್ದು ಈ ಕೀರ್ತನೆಯಿಂದಲೇ. ಅದಕ್ಕೇ ಈ ಶೀರ್ಷಿಕೆ.

ಚಿತ್ರ : ಸಂಗೀತ ವಿದ್ಯಾನಿಧಿ ವಿದ್ಯಾಭೂಷಣ

ಚಿತ್ರ : ವಿದ್ವಾನ್ ಟಿ. ವಿ. ಗೋಪಾಲಕೃಷ್ಣನ್

ಚಿತ್ರ : ವಿದ್ವಾನ್ ಎಂ. ಎಸ್. ಗೋವಿಂದಸ್ವಾಮಿ

ಅವರು ಹಾಡಿದ ರಚನೆಗಳು ಹೀಗಿವೆ:
೧. ಜಯ ಜಾನಕೀ ಕಾಂತ -
ಪುರಂದರ ದಾಸರು
೨. ಎನ್ನಾಡು ನೀ - ವಾಚಸ್ಪತಿ - ಆದಿ - ಪಟ್ಣಂ ಸುಬ್ರಹ್ಮಣ್ಯ ಅಯ್ಯರ್
೩. ನರಸಿಂಹ ಮಾಮವ ಭಗವನ್ ನಿತ್ಯಂ - ಆರಭಿ - ಸ್ವಾತಿ ತಿರುನಾಳ್

೪. ರಂಗನಾಥನ ನೋಡುವ ಬನ್ನಿ
- ಶ್ರೀಪಾದರಾಜರು
೫. ನಗುಮೋಮು - ಅಭೇರಿ - ಆದಿ - ತ್ಯಾಗರಾಜರು

೬. ಯಾರೆ ರಂಗನ ಕರೆಯ ಬಂದವರೊ - ಪುರಂದರ ದಾಸರು

೭. ಶ್ಲೋಕ - ಮನೋಜವಂ ಮಾರುತ ತುಲ್ಯ ವೇಗಂ

೮. ಹನುಮನ ಮತವೆ ಹರಿಯ ಮತವು

೯. ಉಗಾಭೋಗ - ಅಲ್ಪ ಸುಖಕಾಗಿ

೧೦. ಚಂಚಲಿಸದಿರು ಚತುರನಾಗು ಮನವೆ (ಇದರಲ್ಲಿ "ಮನಃ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ" ಎಂಬ ಶ್ಲೋಕವನ್ನು ಸೇರಿಸಿ ಹಾಡಿದರು)

೧೧. ಉಗಾಭೋಗ - ಜಗವ ಸುತ್ತಿಹುದು ನಿನ್ನ ಮಾಯವಯ್ಯಾ

೧೨. ಪಿಳ್ಳಂಗೋವಿಯ ಚೆಲ್ವ ಕೃಷ್ಣನ - ಮೋಹನ
- ಪುರಂದರ ದಾಸರು
೧೩. ಉಗಾಭೋಗ - ದುರಿತ ಜಗಕೆ ಕಂಠೀರವ
೧೪. ಹರಿ ಸ್ಮರಣೆ ಮಾಡೋ ನಿರಂತರ

೧೫. ಸುಮ್ಮನೆ ಬರುವುದೇ ಮುಕ್ತಿ

೧೬. ವರ ಮಂತ್ರಾಲಯ ಪುರ ಮಂದಿರ

೧೭. ಕಾವದೈವವು ನೀನೆ ಕೊಲುವ ದೈವವು ನೀನೆ - ಪುರಂದರ ದಾಸರು

೧೮. ತಂಬೂರಿ ಮೀಟಿದವ - ಪುರಂದರ ದಾಸರು

೧೯. ಭಾಗ್ಯದಾ ಲಕ್ಷ್ಮೀ ಬಾರಮ್ಮಾ - ಮಧ್ಯಮಾವತಿ - ಆದಿ - ಪುರಂದರ ದಾಸರು

೨೦. ಶುಭವಿದು ಶೋಭನ ಹರಿಗೆ - ಮಂಗಳಂ
ಶುಭಂ

Click on images to enlarge.

Tags : 50th Ramanavami Festival, Sri Ramaseva Mandali, Shankarapura, Bangalore, Vid. Vidyabhushana, Vid. T V Gopalakrishnan, Vid. M S Govindaswamy, Vid. Balakrishna

04 April 2009

Ramanavami Music Festivals, Bangalore

Sri Ramaseva Mandali, Chamarajpet
Fort High School Grounds, K R Road, (Near K R Market/KIMS/BIT/BMC) Bangalore.

Click here for Program List.

--------------------------------------------------------------------------------------

Sri Ramaseva Mandali, Shankarpura
Govt Primary School premises, Shankar Mutt Road, Bangalore
Programs start at 7pm.

3-4-2009 :
Hindustani Music by Bharathi Pratap & Party

4-4-2009 :
Bhakti Gayana by Vidwan Vidyabhushana
Violin : Vidwan M S Govindaswamy
Mridangam : Vidwan T V Gopalakrishnan
Morsing : Vidwan Balakrishna

5-4-2009 :
Jugalbandi
Vidwan Dr. Mysore Manjunath (Carnatic Violin)
Pandit Praveen Godkhindi (Hindustani Flute)

6-4-2009 :
Saxophone : Padmashree Kalaimamani Dr Kadri Gopalanath
Viloin : Vidushi Kanyakumari
Mridamgam : Vidwan B Harikumar
Tabla : Vidwan Anantha Krishna Sharma
Khanjari : Vidwan N Amruth
Morsing : Vidwan B Rajashekhar

7-4-2009 :
Carnatic Classical Music by Ganakalabhushana Vidwan R K Padmanabha

8-4-2009 :
Dr. DVG's Mankutimmana Kagga Discourse
Vachana : Vidwan Puttur Narasimha Nayak
Vyakhyana : Shatavadhani Dr. R Ganesh

9-4-2009 :
Carnatic Classical Music by Malladi Brothers

10-4-2009 :
Light Music by Dr C Ashwath & Party

11-4-2009 :
Gana-Kuncha : Sri B K S Verma & Sri Shashidhara Kote

14-4-2009 :
Samvada : "Family Society Country" : Sri Hiremagaluru Kannan & Sri Chakravarthy Soolibele

5-4-2009 to 11-4-2009 everyday from 6pm to 7pm
Discourse on Ramayana (from Sri Rama's Birth till Marriage) by Vidwan Pavagada Prakash Rao

--------------------------------------------------------------------------------------

Sri Rama Mandira, N R Colony, Bangalore
Programs start at 5-45pm.

5-4-2009:
Vocal : Vidushi M S Sheela
Violin : Vidushi Jyotsna Sreekanth
Mridangam : Vidwan Anoor Anantha Krishna Sharma

--------------------------------------------------------------------------------------

Ramanavami Sangeetha Sabha & Sri Vani Vidya Kendra
4th 'B' main, 3rd Phase, Basaveshwara Nagar, Bangalore
Programs start at 6-30pm.

4-4-2009 :
Vocal : Vidushi R A Ramamani
Viloin : Vidwan V H N Bhaskar
Mridamgam : Vidwan V H S Sudheendra
Ghatam : Vidushi V Sukanya Ramgopal

5-4-2009 :
Saxophone : Padmashree Kalaimamani Dr Kadri Gopalanath
Viloin : Vidushi Kanyakumari
Mridamgam : Vidwan B Harikumar
Khanjari : Vidwan N Amruth
Morsing : Vidwan B Rajashekhar

--------------------------------------------------------------------------------------

Sheshadripuram Ramaseva Samithi
Rashtrakavi Kuvempu Rangamandira, Sheshadripuram College premises, Bangalore
Programs start at 6-30pm.

4-4-2009 :
Vocal : Vidwan G Ravikiran
Viloin : Vidwan Tiruvanantapuram N Sampath
Mridamgam : Vidwan B ganapathi raman
Ghatam : Vidwan Ranganatha Chakravarthy

5-4-2009 :
Vocal : Vidushi Nagamani Srinath
Viloin : Vidwan B U Ganesh Prasad
Mridamgam : Vidwan Mohan Raman
Morsing : Vidwan M Gururaj

Program List

--------------------------------------------------------------------------------------

ಸ್ಯಾಕ್ಸೋಫೋನ್ ಸಂಗೀತ ಸುಧೆ

ಶ್ರೀ ರಾಮಸೇವಾ ಮಂಡಳಿಯವರು ನಡೆಸುವ ಸಂಗೀತೋತ್ಸವವು ನಿನ್ನೆ ರಾಮನವಮಿಯ ಶುಭ ದಿನದಂದು ಆರಂಭವಾಯಿತು. ಉದ್ಘಾಟನಾ ಸಮಾರಂಭವು ಸಂಜೆ ೬ ಘಂಟೆಗೆ ಆರಂಭವಾಯಿತು. ಕರ್ನಾಟಕದ ಡಿಜಿಪಿ ಅಜಯ್ ಕುಮಾರ್ ಸಿಂಗ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮನು ಬಳಿಗಾರ್, ಮಂಡಳಿಯ ಅಧ್ಯಕ್ಷ ಮಣಿ ನಾರಾಯಣ ಸ್ವಾಮಿ ಹಾಗೂ ಕರ್ನಾಟಕದ ಸರಕಾರದ ನಿವೃತ್ತ ಕಾರ್ಯದರ್ಶಿ ರವೀಂದ್ರ ಅವರು ಉಪಸ್ಥಿತರಿದ್ದರು. ಸಾಂಪ್ರದಾಯಿಕವಾಗಿ ದೀಪ ಬೆಳಗಿಸಿ ಉದ್ಘಾಟಿಸುವ ಬದಲಾಗಿ ಸಭಾಧ್ಯಕ್ಷ ಅಜಯ್ ಕುಮಾರ್ ರವರು ತಮ್ಮ ಭಾಷಣದ ಮೂಲಕ ಸಂಗೀತೋತ್ಸವವನ್ನು ಉದ್ಘಾಟಿಸಿದರು. ಉದ್ಘಾಟನಾ ಭಾಷಣದಲ್ಲಿ "ಸಂಗೀತ ಯಾವುದೇ ಭಾಷೆ-ಜಾತಿ-ದೇಶಗಳ ಪರಿಧಿಗಳಿಂದ ಬಂಧಿತವಾಗಿಲ್ಲ, ಉತ್ತರದ ಮೀರಾ ಭಜನೆಗಳನ್ನು ದಕ್ಷಿಣದ ಸುಬ್ಬುಲಕ್ಷ್ಮೀ ಹಾಡುತ್ತಿದ್ದರು, ದಿಲ್ಲಿಯಲ್ಲಿ ೧೩ನೇ ಶತಮಾನದಲ್ಲಿದ್ದು ಹಿಂದಿಯಲ್ಲಿ ಬರೆದ ಅಮೀರ್ ಖುಸ್ರೋವಿನ ರಚನೆಗಳನ್ನು ಪಾಕಿಸ್ತಾನದ ಸಾಬ್ರಿ ಸಹೋದರರು ಹಾಡುತ್ತಾರೆ, ಮಲ್ಲಿಕಾ ಸಾರಾಭಾಯ್ ನೃತ್ಯ ಮಾಡುತ್ತಾರೆ, ಸಂಗೀತವು ಒಂದು ಹೃದಯದಿಂದ ಮತ್ತೊಂದು ಹೃದಯಕ್ಕೆ ಹರಿಯುತ್ತದೆ, ಅದು ಹೃದಯ-ಹೃದಯಗಳನ್ನು ಬೆಸೆಯುತ್ತದೆ" ಎಂಬ ಸಂದೇಶವನ್ನು ಕೊಟ್ಟರು.

ಚಿತ್ರ: ಅಜಯ್ ಕುಮಾರ್ ಸಿಂಗ್ ಅವರ ಉದ್ಘಾಟನಾ ಭಾಷಣ

ಚಿತ್ರ: ಸ್ಮರಣ ಸಂಚಿಕೆ ಬಿಡುಗಡೆ
(ಎಡದಿಂದ ವರದರಾಜ್, ಮನು ಬಳಿಗಾರ್, ಅಜಯ್ ಕುಮಾರ್ ಸಿಂಗ್, ಮಣಿ ನಾರಾಯಣ ಸ್ವಾಮಿ, ರವೀಂದ್ರ)

ಇದೇ ಸಂದರ್ಭದಲ್ಲಿ ಮಂಡಳಿಯ ಸ್ಮರಣ ಸಂಚಿಕೆಯನ್ನೂ ಬಿಡುಗಡೆ ಮಾಡಲಾಯಿತು. ನಿರೂಪಕರ(ಹೆಸರು ಗೊತ್ತಿಲ್ಲ) ಕಾರ್ಯಕ್ರಮ ನಿರೂಪಣೆ ಮತ್ತು ನಿರ್ವಹಣೆ ಚೆನ್ನಾಗಿತ್ತು. ಇವರು ತಬಲದ ಜನನದ ಕಥೆಯನ್ನು ಚುಟುಕಾಗಿ ತಿಳಿಸಿದರು. "ಅಮೀರ್ ಖುಸ್ರೋರವರು ಒಮ್ಮೆ ಮೃದಂಗವನ್ನು ಶ್ರುತಿ ಮಾಡುತ್ತಿರುವಾಗ ಅದು ಸರಿಯಾಗಿ ನುಡಿಯಲಿಲ್ಲವಂತೆ. ಆಗ ಅದನ್ನು ೨ ಭಾಗ ಮಾಡಿ ನುಡಿಸಿದಾಗ ಒಳ್ಳೆಯ ನಾದ ಬಂತಂತೆ. ಆಗ ಅವರು ಅವರು ಹೇಳಿದ ಮಾತು ತಬ್-ವೋ-ಬೋಲಾ ಎಂಬುದೇ ತಬಲ ಆಯಿತು" ಇದೇ ಕಥೆ. ರವೀಂದ್ರ ಅವರು ಸ್ವಾಗತಿಸಿದರು. ಮಣಿಯವರು ಎಲ್ಲಾ ಪ್ರಾಯೋಜಕರಿಗೆ ಧನ್ಯವಾದ ಸಮರ್ಪಿಸಿದರು.

ಉದ್ಘಾಟನಾ ಸಮಾರಂಭದ ನಂತರ ೭ ಘಂಟೆಗೆ ಸ್ಯಾಕ್ಸೋಫೋನ್ ಮಾಂತ್ರಿಕ ಡಾ| ಕದ್ರಿ ಗೋಪಾಲನಾಥ್ ರವರಿಂದ ಉತ್ಸವದ ಮೊದಲ ಕಛೇರಿ ಆರಂಭವಾಯಿತು. ಪಕ್ಕವಾದ್ಯದಲ್ಲಿ ಕನ್ಯಾಕುಮಾರಿಯವರು ಪಿಟೀಲಿನಲ್ಲಿ, ಬಿ ಹರಿಕುಮಾರ್ ರವರು ಮೃದಂಗದಲ್ಲಿ, ಎನ್ ಅಮೃತ್ ರವರು ಖಂಜರಿಯಲ್ಲಿ ಹಾಗೂ ಬಿ ರಾಜಶೇಖರ್ ರವರು ಮೋರ್ಸಿಂಗ್ ನಲ್ಲಿ ಸಹಕರಿಸಿದರು.

ಚಿತ್ರ: ಎಡದಿಂದ ಹರಿಕುಮಾರ್, ಅಮೃತ್, ಕದ್ರಿ ಗೋಪಾಲನಾಥ್, ರಾಜಶೇಖರ್, ಕನ್ಯಾಕುಮಾರಿ

ಚಿತ್ರ: ಪದ್ಮಶ್ರೀ ಕಲೈಮಾಮಣಿ ಡಾ| ಕದ್ರಿ ಗೋಪಾಲನಾಥ್

ಹಂಸಧ್ವನಿ ರಾಗದ ದೀಕ್ಷಿತರ ಕೃತಿ "ವಾತಾಪಿ ಗಣಪತಿಂ ಭಜೇ"ಯೊಂದಿಗೆ ಗಣಪತಿ ಸ್ತುತಿ ಮಾಡಿದನಂತರ ಶುದ್ಧಬಂಗಾಳ ರಾಗದಲ್ಲಿ "ರಾಮಭಕ್ತಿ ಸಾಮ್ರಾಜ್ಯ"ವನ್ನು ನುಡಿಸಿದರು. ಮುಖ್ಯ ರಾಗವಾಗಿ ಆಯ್ಕೆ ಮಾಡಿದ್ದು ಮೋಹನವನ್ನು. ಕದ್ರಿಯವರ ಆಲಾಪನೆಯ ನಂತರ ಪಿಟೀಲಿನಲ್ಲಿ ಕನ್ಯಾಕುಮಾರಿಯವರು ರಾಗವನ್ನು ಚೆನ್ನಾಗಿ ನುಡಿಸಿದರು. ಪಾಶ್ಚಾತ್ಯ ಸುಷಿರ ವಾದ್ಯವಾದ ಸ್ಯಾಕ್ಸೋಫೋನ್ ನಲ್ಲಿ ಕರ್ನಾಟಕ ಸಂಗೀತವನ್ನು ನುಡಿಸುವುದು ಸುಲಭದ ಕೆಲಸವಲ್ಲ. ತನಿ ಆವರ್ತನದಲ್ಲಿ ಹಾಗೂ ಇಡೀ ಕಚೇರಿಯಲ್ಲಿ ಹರಿಕುಮಾರ್, ಅಮೃತ್ ಮತ್ತು ರಾಜಶೇಖರ್ ರವರು ಅಚ್ಚುಕಟ್ಟಾಗಿ ನುಡಿಸಿ ಗೋಪಾಲನಾಥರಿಗೆ ಒಳ್ಳೆಯ ಸಹಕಾರ ನೀಡಿದರು, ಸಭಿಕರ ಮನರಂಜಿಸಿದರು. ಪಾಂಡಿತ್ಯ ಪ್ರದರ್ಶನದಲ್ಲಿ ಎಲ್ಲೂ ಲಾಲಿತ್ಯಕ್ಕೆ ಧಕ್ಕೆ ಬರಲಿಲ್ಲ. ಅಮೃತ್ ರವರು ಇತರರಿಗೆ ಏನೂ ಕಮ್ಮಿ ಇಲ್ಲ ಎಂದು ತೋರಿಸಿಕೊಟ್ಟರು. ಕದ್ರಿಯವರು ಆಲಾಪನೆ, ಸ್ವರಪ್ರಸ್ತಾರ, ನೆರವಲ್ ಗಳಲ್ಲಿನ ಮಾಧುರ್ಯತೆ ಮತ್ತು ವೇಗದಿಂದ ತಮ್ಮ ನೈಪುಣ್ಯತೆಯನ್ನು ತೋರಿಸಿದರು. ೩ ಘಂಟೆಗಳ ಕಛೇರಿಯಲ್ಲಿ ಸಭಾಸದರನ್ನು ಮಂತ್ರಮುಗ್ಧರನ್ನಾಗಿಸಿದರು. ಪುರಂದರ ದಾಸರ "ಭಾಗ್ಯದಾ ಲಕ್ಷ್ಮೀ ಬಾರಮ್ಮಾ" ದೊಂದಿಗೆ ಕಛೇರಿ ಸಂಪನ್ನಗೊಂಡಿತು.

ಕಛೇರಿಯಲ್ಲಿ ನುಡಿಸಿದ ಕೃತಿಗಳು ಹೀಗಿದ್ದವು:
೧. ವಾತಾಪಿ - ಹಂಸಧ್ವನಿ - ಆದಿ - ಮುತ್ತುಸ್ವಾಮಿ ದೀಕ್ಷಿತರು
೨. ರಾಮಭಕ್ತಿ ಸಾಮ್ರಾಜ್ಯ - ಶುದ್ಧಬಂಗಾಳ - ಆದಿ - ತ್ಯಾಗರಾಜರು
೩. ಮೋಕ್ಷಮುಗಲದಾ - ಸಾರಮತಿ - ಆದಿ - ತ್ಯಾಗರಾಜರು
೪. ಜ್ಞಾನಮೊಸಗರಾದಾ - ಪೂರ್ವಿ ಕಲ್ಯಾಣಿ - ರೂಪಕ - ತ್ಯಾಗರಾಜರು
೫. ನಿರವಧಿ ಸುಖದ ನಿರ್ಮಲ ರೂಪ - ರವಿಚಂದ್ರಿಕೆ - ಆದಿ - ತ್ಯಾಗರಾಜರು
೬. ಅಖಿಲಾಂಡೇಶ್ವರಿ ರಕ್ಷಮಾಂ - ದ್ವಿಜಾವಂತಿ - ಆದಿ - ಮುತ್ತುಸ್ವಾಮಿ ದೀಕ್ಷಿತರು
೭. ರಘುವಂಶಸುತ - ಕದನಕುತೂಹಲ - ಆದಿ - ಪಟ್ಣಂ ಸುಬ್ರಹ್ಮಣ್ಯ ಅಯ್ಯರ್
೮. ಮೋಹನ ರಾಮ - ಮೋಹನ - ಆದಿ - ತ್ಯಾಗರಾಜರು
೯. ತಿರುಪತಿ ವೆಂಕಟರಮಣ ನಿನಗೇತಕೆ ಬಾರದೊ ಕರುಣ - ಖರಹರಪ್ರಿಯ - ಆದಿ - ಪುರಂದರ ದಾಸರು
೧೦. ವೈಷ್ಣವ ಜನತೋ - ಮಿಶ್ರ ಖಮಾಜ್ - ನರಸಿಂಹ ಮೆಹ್ತಾ
೧೧. ರಘುಪತಿ ರಾಘವ ರಾಜಾರಾಮ್ - ವಿಷ್ಣು ದಿಗಂಬರ್ ಪಲುಸ್ಕರ್
೧೨. ಇನ್ನು ದಯ ಬಾರದೇ ದಾಸನ ಮೇಲೆ - ಕಲ್ಯಾಣ ವಸಂತ - ಖಂಡಛಾಪು - ಪುರಂದರ ದಾಸರು
೧೩. ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದಾ - ತೋಡಿ - ರೂಪಕ - ಶ್ರೀಪಾದರಾಜರು
೧೪. ಭಾಗ್ಯದಾ ಲಕ್ಷ್ಮೀ ಬಾರಮ್ಮಾ - ಪುರಂದರ ದಾಸರು

|| ಶುಭಂ ||

Click on individual photos to enlarge.

Tags : 71st Ramanavami Music Festival, April-May 2009, Kote High School Grounds, Sri Ramaseva Mandali Chamarajpet Bangalore, Carnatic Classical Music, Dr Kadri Gopalanath, Vid. Kanyakumari, Vid. B Harikumar, Vid. N Amruth, Vid B Rajashekhar

03 April 2009

ರಾಮನವಮಿ ಸಂಗೀತೋತ್ಸವ ೨೦೦೯

ಯುಗಾದಿ-ರಾಮನವಮಿ ಬಂತು ಅಂದ್ರೆ ಬೆಂಗಳೂರಿನ ಶಾಸ್ತ್ರೀಯ ಸಂಗೀತಾಭಿಮಾನಿಗಳಿಗೆ ಸಂಗೀತದ ರಸದೌತಣ. ಚೆನ್ನೈನಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯುವ ಉತ್ಸವದಂತೆ ಬೆಂಗಳೂರಿನಲ್ಲಿ ರಾಮನವಮಿ ಸಂದರ್ಭದಲ್ಲಿ ನಡೆಯುತ್ತದೆ. ಶೇಷಾದ್ರಿಪುರ, ಶಂಕರಪುರ, ನರಸಿಂಹರಾಜ ಕಾಲೋನಿ ಹೀಗೆ ತುಂಬಾ ಕಡೆಗಳಲ್ಲಿ ಸಂಗೀತೋತ್ಸವಗಳು ನಡೆಯುತ್ತವೆ. ಆದರೆ ಚಾಮರಾಜ ಪೇಟೆಯ ಶ್ರೀ ರಾಮ ಸೇವಾ ಮಂಡಳಿಯವರು ಕೋಟೆ ಪ್ರೌಢ ಶಾಲೆಯ ಮೈದಾನದಲ್ಲಿ ನಡೆಸುವ ರಾಮನವಮಿ ಸಂಗೀತೋತ್ಸವ ತುಂಬಾ ಪ್ರಸಿದ್ಧ. ಜನರು ಇದಕ್ಕಾಗಿ ಕಾತರದಿಂದ ಕಾಯುತ್ತಿರುತ್ತಾರೆ.

ಸಾಮಾನ್ಯವಾಗಿ ಯುಗಾದಿಯಂದು ಕುಮಾರಿ ಕನ್ಯಾಕುಮಾರಿಯವರ ಪಿಟೀಲು ಸಹಕಾರದೊಂದಿಗೆ ಕದ್ರಿ ಗೋಪಾಲನಾಥ್ ಅವರ ಕಛೇರಿಯೊಂದಿಗೆ ಆರಂಭವಾಗುವ ಉತ್ಸವ ೩೫-೪೦ ದಿನಗಳವರೆಗೆ ನಡೆಯುತ್ತದೆ. ಕರ್ನಾಟಕ ಹಾಗೂ ಹಿಂದುಸ್ಥಾನಿ ಸಂಗೀತದ ಅತಿರಥ-ಮಹಾರಥರು ಇಲ್ಲಿ ಬಂದು ಗಾಯನ-ತನಿ ಸಂಗೀತ ಕಛೇರಿ ನಡೆಸಿಕೊಡುತ್ತಾರೆ. ಹಿಂದೆ ಸುಬ್ಬುಲಕ್ಷ್ಮೀ, ಭೀಮಸೇನ್ ಜೋಶಿ, ಚೆಂಬೈ ವೈದ್ಯನಾಥ ಭಾಗವತರು, ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಟಿ ಆರ್ ಮಹಾಲಿಂಗಮ್, ಕುನ್ನಾಕುಡಿ ವೈದ್ಯನಾಥನ್ ಎಲ್ಲಾ ಬಂದು ಕಛೇರಿ ನಡೆಸಿಕೊಡ್ತಾ ಇದ್ರು. ಈಗ ವಿದ್ಯಾಭೂಷಣ, ಆರ್ ಕೆ ಶ್ರೀಕಂಠನ್, ಆರ್ ಕೆ ಪದ್ಮನಾಭ, ಎಸ್ ಶಂಕರ್, ಎಂ ಎಸ್ ಶೀಲಾ, ರುದ್ರಪಟ್ಣಂ ಸಹೋದರರು, ಬೆಂಗಳೂರು ಸಹೋದರರು, ಮೈಸೂರು ಸಹೋದರರು, ಸ್ಮಿತಾ ಬೆಳ್ಳೂರು, ಹಾರ್ಮೋನಿಯಮ್ ರಾಮದಾಸ್, ಪ್ರವೀಣ್ ಗೋಡ್ಖಿಂಡಿ, ಸುಮಾ ಸುಧೀಂದ್ರ, ಜ್ಯೋತ್ಸ್ನಾ ಶ್ರೀಕಾಂತ್, ಕಲಾವತಿ ಅವಧೂತ್, ಪಟ್ಟಾಭಿರಾಮ ಪಂಡಿತ್, ವಿನಯ್ ಶರ್ವ, ಅನಂತರಾಮ-ಅಮಿತ್ ನಾಡಿಗ್, ಯೇಸುದಾಸ್, ಕದ್ರಿ ಗೋಪಾಲನಾಥ್, ಕನ್ಯಾಕುಮಾರಿ, ಎಂ ಎಸ್ ಗೋಪಾಲಕೃಷ್ಣನ್, ಮ್ಯಾಂಡೋಲಿನ್ ಶ್ರೀನಿವಾಸ್, ಎನ್ ರಮಣಿ, ಪಿ ಉನ್ನಿಕೃಷ್ಣನ್, ಎಂ ಬಾಲಮುರಳಿ ಕೃಷ್ಣ, ಗಣೇಶ್-ಕುಮಾರೇಶ್, ಬಾಂಬೆ ಜಯಶ್ರೀ, ಸುಧಾ ರಘುನಾಥನ್, ಬಾಂಬೆ ಸಹೋದರಿಯರು, ಟಿ ಎಸ್ ಸತ್ಯವತಿ, ನಿತ್ಯಶ್ರೀ ಮಹಾದೇವನ್, ನಾಗಮಣಿ ಶ್ರೀನಾಥ್, ಸಂಗೀತಾ ಶಿವಕುಮಾರ್, ಟಿ ಎಂ ಕೃಷ್ಣ, ಸಂಜಯ್ ಸುಬ್ರಹ್ಮಣ್ಯಂ, ಮಲ್ಲಾಡಿ ಸಹೋದರರು, ಹೈದರಾಬಾದ್ ಸಹೋದರರು, ನೈವೇಲಿ ಸಂತಾನ ಗೋಪಾಲನ್, ಟಿ ಎನ್ ಕೃಷ್ಣನ್, ಟಿ ಎನ್ ಶೇಷಗೋಪಾಲನ್, ಟಿ ವಿ ಶಂಕರನಾರಾಯಣನ್, ಟಿ ವಿ ಗೋಪಾಲಕೃಷ್ಣನ್, ಎನ್ ರಾಜಮ್, ರೋನು ಮಜುಂದಾರ್, ಶುಭೇಂದ್ರ, ಅಮ್ಜದ್ ಅಲಿ ಖಾನ್ ಮುಂತಾದವರಲ್ಲಿ ಹೆಚ್ಚಿನವರು ಬಂದು ನಮ್ಮನ್ನು ಸಂಗೀತ ಸಾಗರದಲ್ಲಿ ತೇಲಿಸುತ್ತಾರೆ. ಸಂಗೀತ ಕಾರ್ಯಕ್ರಮಗಳು ಸಂಜೆ ೬-೩೦ರಿಂದ ೯-೩೦ರ ವರೆಗೆ ನಡೆಯುತ್ತವೆ. ಇಲ್ಲಿನ ಜನರ ಅಭಿರುಚಿಗೆ ತಕ್ಕಂತೆ ಹಿಂದುಸ್ಥಾನಿಗಿಂತ ಕರ್ನಾಟಕ ಶೈಲಿಯ ಸಂಗೀತವೇ ಜಾಸ್ತಿ.

ಸಂಜೆ ೫-೧೫ರಿಂದ ೬-೧೫ರ ವರೆಗೆ ಸಂಗೀತ ಪ್ರತಿಭಾಕಾಂಕ್ಷಿಗಳಿಂದ ಕಛೇರಿಗಳು ನಡೆಯುತ್ತವೆ. ಇದರಲ್ಲಿ ೩೦ ವರ್ಷಕ್ಕಿಂತ ಕೆಳಗಿನ ಅರಳುತ್ತಿರುವ ಪ್ರತಿಭೆಗಳು ಭಾಗವಹಿಸುತ್ತಾರೆ. ಇದರಲ್ಲಿ ಚೆನ್ನಾಗಿ ಪ್ರದರ್ಶನ ನೀಡಿದವರನ್ನು ಉತ್ಸವದ ಕೊನೆಯಲ್ಲಿ ಪುರಸ್ಕರಿಸಲಾಗುತ್ತದೆ.

ಅಲ್ಲದೇ ಇತ್ತೀಚೆಗೆ ೪-೫ ವರ್ಷಗಳಿಂದ ಒಂದು ಒಳ್ಳೆಯ ಪರಿಪಾಠವನ್ನು ಆರಂಭಿಸಿದ್ದಾರೆ. ಅದೇನೆಂದರೆ ಸಂಗೀತ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿದವರನ್ನು ಗುರುತಿಸಿ ಅವರಿಗೆ ಎಸ್ ವಿ ನಾರಾಯಣಸ್ವಾಮಿ ಪ್ರಶಸ್ತಿಯನ್ನು ಕೊಡೋದು. ಹಿಂದೆ ಎಂ ಎಸ್ ಸುಬ್ಬುಲಕ್ಷ್ಮಿ, ಎಂ ಬಾಲಮುರಳಿ ಕೃಷ್ಣ, ಆರ್ ಆರ್ ಕೇಶವಮೂರ್ತಿ, ಆರ್ ಕೆ ಶ್ರೀಕಂಠನ್ ಇವರಿಗೆಲ್ಲಾ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು. ಈ ಸಲ ಹಿಂದುಸ್ಥಾನಿ ಸಂಗೀತದ ದಿಗ್ಗಜ ಪಂಡಿತ್ ಜಸ್ ರಾಜ್ ರವರನ್ನು ಆಯ್ಕೆ ಮಾಡಿದ್ದಾರಂತೆ.

ಸಂಗೀತದ ಜೊತೆಗೆ ಬೆಳಗ್ಗೆ ರಾಮಾಯಣ, ಮಹಾಭಾರತ, ಭಾಗವತದಂತಹ ಪುರಾಣಗಳ ಬಗ್ಗೆ ಉಪನ್ಯಾಸ-ಪಾರಾಯಣಗಳೂ ನಡೆಯುತ್ತವೆ.

ದಿವಂಗತ ಎಸ್ ವಿ ನಾರಾಯಣಸ್ವಾಮಿಯವರಿಂದ ೧೯೩೯ರಲ್ಲಿ ಆರಂಭವಾದ ಈ ಮಂಡಳಿ ಕಳೆದ ೭೦ ವರ್ಷಗಳಿಂದ ಸತತವಾಗಿ ಸಂಗೀತೋತ್ಸವಗಳನ್ನು ನಡೆಸಿಕೊಂಡು ಬಂದಿದೆ. ನಾನಂತೂ ೨೦೦೧ರಿಂದ ಪ್ರತಿ ವರ್ಷ ಹೋಗ್ತಾ ಇದ್ದೀನಿ. ಪ್ರತಿ ವರ್ಷ ೨೦ಕ್ಕೂ ಹೆಚ್ಚು ಕಛೇರಿಗಳನ್ನು ಕೇಳ್ತೀನಿ. ಈ ಸಲ ಎಪ್ರಿಲ್ ೩ರಂದು ಉತ್ಸವ ಆರಂಭವಾಗಲಿದೆ.

(ಕಛೇರಿ ಮಧ್ಯೆ ಎದ್ದು ಹೋಗುವುದು, ತನಿ ಆವರ್ತನ ಆರಂಭವಾದ ಕೂಡಲೆ ಮನೆಗೆ ಹೊರಡುವುದು, ಅಲ್ಲಿ ಕೂತು ಕಡ್ಲೆಪುರಿ ತಿನ್ನೋದು, ಜಂಗಮವಾಣಿಯಲ್ಲಿ ಮಾತಾಡೊದು ಎಲ್ಲಾ ಬೇಡ, ದಯವಿಟ್ಟು ಬೇಡ. ಇದರಿಂದ ಕಲಾವಿದರ ಏಕಾಗ್ರತೆಗೆ ಧಕ್ಕೆ ಬರುತ್ತೆ ಇಲ್ಲಾ ಅವರಿಗೆ ಅವಮಾನ ಮಾಡಿದಂತಾಗುತ್ತದೆ. ಅಲ್ಲದೇ ಪಕ್ಕದಲ್ಲಿ ಕುಳಿತವರಿಗೆ ತೊಂದರೆ.)

ನೀವೂ ಸಂಗೀತಾಸಕ್ತರಾಗಿದ್ದರೆ ಕಾರ್ಯಕ್ರಮ ಪಟ್ಟಿ ನೋಡಿ ಬನ್ನಿ. ಸಂಗೀತದ ರಸದೌತಣವನ್ನು ಸವಿಯೋಣ.

Tags : 71st Ramanavami Music Festival, April-May 2009, Kote High School Grounds, Sri Ramaseva Mandali Chamarajpet Bangalore, Carnatic Classical Music