05 April 2009

ಪಿಳ್ಳಂಗೋವಿಯ ವಿದ್ಯಾಭೂಷಣ


ಸಂಗೀತ ವಿದ್ಯಾನಿಧಿ ವಿದ್ಯಾಭೂಷಣ ಅವರ ಸಂಗೀತವನ್ನು ಮತ್ತೆ ಕೇಳುವ ಅವಕಾಶ ಒದಗಿ ಬಂದದ್ದು ನಿನ್ನೆ ಶಂಕರಪುರದಲ್ಲಿ. ಅಲ್ಲಿನ ಶ್ರೀ ರಾಮಸೇವಾ ಮಂಡಳಿಯವರು ೫೦ನೇ ವರ್ಷದ ಶ್ರೀ ರಾಮನವಮಿ ಸಂಗೀತೋತ್ಸವವನ್ನು ನಡೆಸುತ್ತಿದ್ದಾರೆ. ನಾನು ವಿದ್ಯಾಭೂಷಣರ ಸಂಗೀತವನ್ನು ತುಂಬಾ ಸಲ ಕೇಳಿದ್ದರೂ ನಿನ್ನೆ ಒಂದು ವಿಶೇಷತೆ ಇತ್ತು. ಅಲ್ಲಿ ಮೃದಂಗದಲ್ಲಿ ಸಹಕಾರ ನೀಡಿದವರು ಮತ್ತಾರೂ ಅಲ್ಲ, ಅವರ ಗುರುಗಳಾದ ಟಿ. ವಿ. ಗೋಪಾಲಕೃಷ್ಣನ್. ಪಿಟೀಲಿನಲ್ಲಿ ಎಂದಿನಂತೆ ಎಂ. ಎಸ್. ಗೋವಿಂದಸ್ವಾಮಿ ಮತ್ತು ಮೋರ್ಸಿಂಗ್ ನಲ್ಲಿ ಬಾಲಕೃಷ್ಣ ಅವರಿದ್ದರು. ಕಾರ್ಯಕ್ರಮ ಪಟ್ಟಿಯಲ್ಲಿ ಭಕ್ತಿ ಸಂಗೀತ ಅಂತ ಇತ್ತು. ಆದರೆ ವಿದ್ಯಾಭೂಷಣರು ಹೆಚ್ಚಿನ ಕೃತಿಗಳಿಗೆ ಆಲಾಪನೆ ಮತ್ತು ಸ್ವರ ಪ್ರಸ್ತಾರ ಹಾಕಿದ್ದರು. ಮುಖ್ಯವಾಗಿ ಅಭೇರಿ ರಾಗವನ್ನು ವಿಸ್ತೃತವಾಗಿ ಆಲಾಪನೆ ಮಾಡಿ, ತ್ಯಾಗರಾಜರ ಕೃತಿ "ನಗುಮೋಮು" ಹಾಡಿದರು. ಆದ್ದರಿಂದ ಇದು ಒಂದು ಪೂರ್ಣ ಪ್ರಮಾಣದ ಶಾಸ್ತ್ರೀಯ ಸಂಗೀತ ಕಛೇರಿ ಅಂತ ಅನ್ನಿಸಿತು.

ಚಿತ್ರ : ಎಡದಿಂದ ಟಿ. ವಿ. ಗೋಪಾಲಕೃಷ್ಣನ್, ಬಾಲಕೃಷ್ಣ , ವಿದ್ಯಾಭೂಷಣ, ಎಂ. ಎಸ್. ಗೋವಿಂದಸ್ವಾಮಿ

ಕಛೇರಿ ಹೇಗಿತ್ತು ಅಂತ ಹೇಳುವ ಅವಶ್ಯಕತೆ ಇಲ್ಲವೇನೋ. ಇಂಥಾ ಸಂಗೀತ ದಿಗ್ಗಜರು ವೇದಿಕೆ ಮೇಲೆ ಇರೋವಾಗ ಹೇಗಿತ್ತು ಅಂತ ನೀವೇ ಊಹಿಸಬಹುದು. ವಿದ್ಯಾಭೂಷಣರ ಗಾನ ಮಾಧುರ್ಯತೆಗೆ ಮನ ಸೋಲದವರು ಯಾರೂ ಇಲ್ಲ. ತನಿ ಆವರ್ತನಕ್ಕೆ ಪ್ರೇಕ್ಷಕರ ಕರತಾಡನವನ್ನು ಕೇಳಿ ಟಿವಿಜಿ ಹೀಗೆ ಉದ್ಗರಿಸಿದರು "ನನ್ನದೇನೂ ಇಲ್ಲ, ಎಲ್ಲಾ ಇವರದ್ದು(ವಿದ್ಯಾಭೂಷಣ), ಅವರು ಇಷ್ಟು ಭಕ್ತಿ-ಭಾವ ಪರವಶರಾಗಿ ಹಾಡೋದ್ರಿಂದ ನಾನು ಹೀಗೆ ನುಡಿಸಲು ಸಾಧ್ಯವಾಗುತ್ತೆ, I am 76, but when I play with him, I feel like 36".

ಇನ್ನು ಮೋಹನ ರಾಗದಲ್ಲಿ ಪುರಂದರ ದಾಸರ ಕೀರ್ತನೆ "ಪಿಳ್ಳಂಗೋವಿಯ ಚೆಲ್ವ ಕೃಷ್ಣನ" ಹಾಡದೇ ವಿದ್ಯಾಭೂಷಣರ ಕಛೇರಿ ಪೂರ್ಣಗೊಳ್ಳುವುದೇ ? ಖಂಡಿತಾ ಇಲ್ಲ. ಅದನ್ನೂ ಹಾಡಿ ಸಂಗೀತ ಕಲಾಭಿಮಾನಿಗಳನ್ನು ರಂಜಿಸಿದರು. ನಾನೂ ಮೊದ ಮೊದಲು ವಿದ್ಯಾಭೂಷಣರನ್ನು ಕೇಳಿದ್ದು ಈ ಕೀರ್ತನೆಯಿಂದಲೇ. ಅದಕ್ಕೇ ಈ ಶೀರ್ಷಿಕೆ.

ಚಿತ್ರ : ಸಂಗೀತ ವಿದ್ಯಾನಿಧಿ ವಿದ್ಯಾಭೂಷಣ

ಚಿತ್ರ : ವಿದ್ವಾನ್ ಟಿ. ವಿ. ಗೋಪಾಲಕೃಷ್ಣನ್

ಚಿತ್ರ : ವಿದ್ವಾನ್ ಎಂ. ಎಸ್. ಗೋವಿಂದಸ್ವಾಮಿ

ಅವರು ಹಾಡಿದ ರಚನೆಗಳು ಹೀಗಿವೆ:
೧. ಜಯ ಜಾನಕೀ ಕಾಂತ -
ಪುರಂದರ ದಾಸರು
೨. ಎನ್ನಾಡು ನೀ - ವಾಚಸ್ಪತಿ - ಆದಿ - ಪಟ್ಣಂ ಸುಬ್ರಹ್ಮಣ್ಯ ಅಯ್ಯರ್
೩. ನರಸಿಂಹ ಮಾಮವ ಭಗವನ್ ನಿತ್ಯಂ - ಆರಭಿ - ಸ್ವಾತಿ ತಿರುನಾಳ್

೪. ರಂಗನಾಥನ ನೋಡುವ ಬನ್ನಿ
- ಶ್ರೀಪಾದರಾಜರು
೫. ನಗುಮೋಮು - ಅಭೇರಿ - ಆದಿ - ತ್ಯಾಗರಾಜರು

೬. ಯಾರೆ ರಂಗನ ಕರೆಯ ಬಂದವರೊ - ಪುರಂದರ ದಾಸರು

೭. ಶ್ಲೋಕ - ಮನೋಜವಂ ಮಾರುತ ತುಲ್ಯ ವೇಗಂ

೮. ಹನುಮನ ಮತವೆ ಹರಿಯ ಮತವು

೯. ಉಗಾಭೋಗ - ಅಲ್ಪ ಸುಖಕಾಗಿ

೧೦. ಚಂಚಲಿಸದಿರು ಚತುರನಾಗು ಮನವೆ (ಇದರಲ್ಲಿ "ಮನಃ ಏವ ಮನುಷ್ಯಾಣಾಂ ಕಾರಣಂ ಬಂಧ ಮೋಕ್ಷಯೋಃ" ಎಂಬ ಶ್ಲೋಕವನ್ನು ಸೇರಿಸಿ ಹಾಡಿದರು)

೧೧. ಉಗಾಭೋಗ - ಜಗವ ಸುತ್ತಿಹುದು ನಿನ್ನ ಮಾಯವಯ್ಯಾ

೧೨. ಪಿಳ್ಳಂಗೋವಿಯ ಚೆಲ್ವ ಕೃಷ್ಣನ - ಮೋಹನ
- ಪುರಂದರ ದಾಸರು
೧೩. ಉಗಾಭೋಗ - ದುರಿತ ಜಗಕೆ ಕಂಠೀರವ
೧೪. ಹರಿ ಸ್ಮರಣೆ ಮಾಡೋ ನಿರಂತರ

೧೫. ಸುಮ್ಮನೆ ಬರುವುದೇ ಮುಕ್ತಿ

೧೬. ವರ ಮಂತ್ರಾಲಯ ಪುರ ಮಂದಿರ

೧೭. ಕಾವದೈವವು ನೀನೆ ಕೊಲುವ ದೈವವು ನೀನೆ - ಪುರಂದರ ದಾಸರು

೧೮. ತಂಬೂರಿ ಮೀಟಿದವ - ಪುರಂದರ ದಾಸರು

೧೯. ಭಾಗ್ಯದಾ ಲಕ್ಷ್ಮೀ ಬಾರಮ್ಮಾ - ಮಧ್ಯಮಾವತಿ - ಆದಿ - ಪುರಂದರ ದಾಸರು

೨೦. ಶುಭವಿದು ಶೋಭನ ಹರಿಗೆ - ಮಂಗಳಂ
ಶುಭಂ

Click on images to enlarge.

Tags : 50th Ramanavami Festival, Sri Ramaseva Mandali, Shankarapura, Bangalore, Vid. Vidyabhushana, Vid. T V Gopalakrishnan, Vid. M S Govindaswamy, Vid. Balakrishna

2 comments:

  1. ವಿದ್ಯಾಭೂಷಣ ಅವರದ್ದು ಒಂದು ವಿಶೇಷ ಶೈಲಿ -ಅಲ್ಲಿ ಭಕ್ತಿಗೀತೆಗಳ ಅದ್ಭುತ ಪ್ರಪಂಚ ಸುಂದರವಾಗಿ ಮೂಡಿ ಬರೋದು. ಚಿಕ್ಕಂದಿನಲ್ಲಿ ಪಿಳ್ಳಂಗೋವಿಯ ಹಾಡಿನಿಂದ ಅವರ ಕಡೆ ಆಕರ್ಷಿತನಾಗಿ ಈಗಲೂ ಆಗೊಮ್ಮೆ ಈಗೊಮ್ಮೆ ಅವರ ಭಕ್ತಿ ಕೀರ್ತನೆ ಕೇಳೋದೇ ಒಂದು ರೋಮಾಂಚಕಾರಿ ಅನುಭವ! ಧನ್ಯವಾದ ಈ ಕಛೇರಿಯ ಬಗ್ಗೆ ಬರೆದುದಕ್ಕೆ.

    ReplyDelete
  2. ಹೌದು. ಅವರ ಕಂಠ ಮಾಧುರ್ಯ, ಭಾವ, ತನ್ಮಯತೆ ಅಪ್ರತಿಮ. ಸಂಗೀತದಿಂದ ನಮ್ಮನ್ನೂ ದೇವಲೋಕಕ್ಕೆ ಕರೆದೊಯ್ಯುತ್ತಾರೆ. ಕೆಲವರಿಗೆ ದಿನದ ಆರಂಭವಾಗುವುದು ವಿದ್ಯಾಭೂಷಣರ ದಾಸರ ಪದಗಳಿಂದಲೇ, ಅದರಲ್ಲೂ "ಉದಯರಾಗ"ದಿಂದ.

    ReplyDelete