04 April 2009

ಸ್ಯಾಕ್ಸೋಫೋನ್ ಸಂಗೀತ ಸುಧೆ

ಶ್ರೀ ರಾಮಸೇವಾ ಮಂಡಳಿಯವರು ನಡೆಸುವ ಸಂಗೀತೋತ್ಸವವು ನಿನ್ನೆ ರಾಮನವಮಿಯ ಶುಭ ದಿನದಂದು ಆರಂಭವಾಯಿತು. ಉದ್ಘಾಟನಾ ಸಮಾರಂಭವು ಸಂಜೆ ೬ ಘಂಟೆಗೆ ಆರಂಭವಾಯಿತು. ಕರ್ನಾಟಕದ ಡಿಜಿಪಿ ಅಜಯ್ ಕುಮಾರ್ ಸಿಂಗ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮನು ಬಳಿಗಾರ್, ಮಂಡಳಿಯ ಅಧ್ಯಕ್ಷ ಮಣಿ ನಾರಾಯಣ ಸ್ವಾಮಿ ಹಾಗೂ ಕರ್ನಾಟಕದ ಸರಕಾರದ ನಿವೃತ್ತ ಕಾರ್ಯದರ್ಶಿ ರವೀಂದ್ರ ಅವರು ಉಪಸ್ಥಿತರಿದ್ದರು. ಸಾಂಪ್ರದಾಯಿಕವಾಗಿ ದೀಪ ಬೆಳಗಿಸಿ ಉದ್ಘಾಟಿಸುವ ಬದಲಾಗಿ ಸಭಾಧ್ಯಕ್ಷ ಅಜಯ್ ಕುಮಾರ್ ರವರು ತಮ್ಮ ಭಾಷಣದ ಮೂಲಕ ಸಂಗೀತೋತ್ಸವವನ್ನು ಉದ್ಘಾಟಿಸಿದರು. ಉದ್ಘಾಟನಾ ಭಾಷಣದಲ್ಲಿ "ಸಂಗೀತ ಯಾವುದೇ ಭಾಷೆ-ಜಾತಿ-ದೇಶಗಳ ಪರಿಧಿಗಳಿಂದ ಬಂಧಿತವಾಗಿಲ್ಲ, ಉತ್ತರದ ಮೀರಾ ಭಜನೆಗಳನ್ನು ದಕ್ಷಿಣದ ಸುಬ್ಬುಲಕ್ಷ್ಮೀ ಹಾಡುತ್ತಿದ್ದರು, ದಿಲ್ಲಿಯಲ್ಲಿ ೧೩ನೇ ಶತಮಾನದಲ್ಲಿದ್ದು ಹಿಂದಿಯಲ್ಲಿ ಬರೆದ ಅಮೀರ್ ಖುಸ್ರೋವಿನ ರಚನೆಗಳನ್ನು ಪಾಕಿಸ್ತಾನದ ಸಾಬ್ರಿ ಸಹೋದರರು ಹಾಡುತ್ತಾರೆ, ಮಲ್ಲಿಕಾ ಸಾರಾಭಾಯ್ ನೃತ್ಯ ಮಾಡುತ್ತಾರೆ, ಸಂಗೀತವು ಒಂದು ಹೃದಯದಿಂದ ಮತ್ತೊಂದು ಹೃದಯಕ್ಕೆ ಹರಿಯುತ್ತದೆ, ಅದು ಹೃದಯ-ಹೃದಯಗಳನ್ನು ಬೆಸೆಯುತ್ತದೆ" ಎಂಬ ಸಂದೇಶವನ್ನು ಕೊಟ್ಟರು.

ಚಿತ್ರ: ಅಜಯ್ ಕುಮಾರ್ ಸಿಂಗ್ ಅವರ ಉದ್ಘಾಟನಾ ಭಾಷಣ

ಚಿತ್ರ: ಸ್ಮರಣ ಸಂಚಿಕೆ ಬಿಡುಗಡೆ
(ಎಡದಿಂದ ವರದರಾಜ್, ಮನು ಬಳಿಗಾರ್, ಅಜಯ್ ಕುಮಾರ್ ಸಿಂಗ್, ಮಣಿ ನಾರಾಯಣ ಸ್ವಾಮಿ, ರವೀಂದ್ರ)

ಇದೇ ಸಂದರ್ಭದಲ್ಲಿ ಮಂಡಳಿಯ ಸ್ಮರಣ ಸಂಚಿಕೆಯನ್ನೂ ಬಿಡುಗಡೆ ಮಾಡಲಾಯಿತು. ನಿರೂಪಕರ(ಹೆಸರು ಗೊತ್ತಿಲ್ಲ) ಕಾರ್ಯಕ್ರಮ ನಿರೂಪಣೆ ಮತ್ತು ನಿರ್ವಹಣೆ ಚೆನ್ನಾಗಿತ್ತು. ಇವರು ತಬಲದ ಜನನದ ಕಥೆಯನ್ನು ಚುಟುಕಾಗಿ ತಿಳಿಸಿದರು. "ಅಮೀರ್ ಖುಸ್ರೋರವರು ಒಮ್ಮೆ ಮೃದಂಗವನ್ನು ಶ್ರುತಿ ಮಾಡುತ್ತಿರುವಾಗ ಅದು ಸರಿಯಾಗಿ ನುಡಿಯಲಿಲ್ಲವಂತೆ. ಆಗ ಅದನ್ನು ೨ ಭಾಗ ಮಾಡಿ ನುಡಿಸಿದಾಗ ಒಳ್ಳೆಯ ನಾದ ಬಂತಂತೆ. ಆಗ ಅವರು ಅವರು ಹೇಳಿದ ಮಾತು ತಬ್-ವೋ-ಬೋಲಾ ಎಂಬುದೇ ತಬಲ ಆಯಿತು" ಇದೇ ಕಥೆ. ರವೀಂದ್ರ ಅವರು ಸ್ವಾಗತಿಸಿದರು. ಮಣಿಯವರು ಎಲ್ಲಾ ಪ್ರಾಯೋಜಕರಿಗೆ ಧನ್ಯವಾದ ಸಮರ್ಪಿಸಿದರು.

ಉದ್ಘಾಟನಾ ಸಮಾರಂಭದ ನಂತರ ೭ ಘಂಟೆಗೆ ಸ್ಯಾಕ್ಸೋಫೋನ್ ಮಾಂತ್ರಿಕ ಡಾ| ಕದ್ರಿ ಗೋಪಾಲನಾಥ್ ರವರಿಂದ ಉತ್ಸವದ ಮೊದಲ ಕಛೇರಿ ಆರಂಭವಾಯಿತು. ಪಕ್ಕವಾದ್ಯದಲ್ಲಿ ಕನ್ಯಾಕುಮಾರಿಯವರು ಪಿಟೀಲಿನಲ್ಲಿ, ಬಿ ಹರಿಕುಮಾರ್ ರವರು ಮೃದಂಗದಲ್ಲಿ, ಎನ್ ಅಮೃತ್ ರವರು ಖಂಜರಿಯಲ್ಲಿ ಹಾಗೂ ಬಿ ರಾಜಶೇಖರ್ ರವರು ಮೋರ್ಸಿಂಗ್ ನಲ್ಲಿ ಸಹಕರಿಸಿದರು.

ಚಿತ್ರ: ಎಡದಿಂದ ಹರಿಕುಮಾರ್, ಅಮೃತ್, ಕದ್ರಿ ಗೋಪಾಲನಾಥ್, ರಾಜಶೇಖರ್, ಕನ್ಯಾಕುಮಾರಿ

ಚಿತ್ರ: ಪದ್ಮಶ್ರೀ ಕಲೈಮಾಮಣಿ ಡಾ| ಕದ್ರಿ ಗೋಪಾಲನಾಥ್

ಹಂಸಧ್ವನಿ ರಾಗದ ದೀಕ್ಷಿತರ ಕೃತಿ "ವಾತಾಪಿ ಗಣಪತಿಂ ಭಜೇ"ಯೊಂದಿಗೆ ಗಣಪತಿ ಸ್ತುತಿ ಮಾಡಿದನಂತರ ಶುದ್ಧಬಂಗಾಳ ರಾಗದಲ್ಲಿ "ರಾಮಭಕ್ತಿ ಸಾಮ್ರಾಜ್ಯ"ವನ್ನು ನುಡಿಸಿದರು. ಮುಖ್ಯ ರಾಗವಾಗಿ ಆಯ್ಕೆ ಮಾಡಿದ್ದು ಮೋಹನವನ್ನು. ಕದ್ರಿಯವರ ಆಲಾಪನೆಯ ನಂತರ ಪಿಟೀಲಿನಲ್ಲಿ ಕನ್ಯಾಕುಮಾರಿಯವರು ರಾಗವನ್ನು ಚೆನ್ನಾಗಿ ನುಡಿಸಿದರು. ಪಾಶ್ಚಾತ್ಯ ಸುಷಿರ ವಾದ್ಯವಾದ ಸ್ಯಾಕ್ಸೋಫೋನ್ ನಲ್ಲಿ ಕರ್ನಾಟಕ ಸಂಗೀತವನ್ನು ನುಡಿಸುವುದು ಸುಲಭದ ಕೆಲಸವಲ್ಲ. ತನಿ ಆವರ್ತನದಲ್ಲಿ ಹಾಗೂ ಇಡೀ ಕಚೇರಿಯಲ್ಲಿ ಹರಿಕುಮಾರ್, ಅಮೃತ್ ಮತ್ತು ರಾಜಶೇಖರ್ ರವರು ಅಚ್ಚುಕಟ್ಟಾಗಿ ನುಡಿಸಿ ಗೋಪಾಲನಾಥರಿಗೆ ಒಳ್ಳೆಯ ಸಹಕಾರ ನೀಡಿದರು, ಸಭಿಕರ ಮನರಂಜಿಸಿದರು. ಪಾಂಡಿತ್ಯ ಪ್ರದರ್ಶನದಲ್ಲಿ ಎಲ್ಲೂ ಲಾಲಿತ್ಯಕ್ಕೆ ಧಕ್ಕೆ ಬರಲಿಲ್ಲ. ಅಮೃತ್ ರವರು ಇತರರಿಗೆ ಏನೂ ಕಮ್ಮಿ ಇಲ್ಲ ಎಂದು ತೋರಿಸಿಕೊಟ್ಟರು. ಕದ್ರಿಯವರು ಆಲಾಪನೆ, ಸ್ವರಪ್ರಸ್ತಾರ, ನೆರವಲ್ ಗಳಲ್ಲಿನ ಮಾಧುರ್ಯತೆ ಮತ್ತು ವೇಗದಿಂದ ತಮ್ಮ ನೈಪುಣ್ಯತೆಯನ್ನು ತೋರಿಸಿದರು. ೩ ಘಂಟೆಗಳ ಕಛೇರಿಯಲ್ಲಿ ಸಭಾಸದರನ್ನು ಮಂತ್ರಮುಗ್ಧರನ್ನಾಗಿಸಿದರು. ಪುರಂದರ ದಾಸರ "ಭಾಗ್ಯದಾ ಲಕ್ಷ್ಮೀ ಬಾರಮ್ಮಾ" ದೊಂದಿಗೆ ಕಛೇರಿ ಸಂಪನ್ನಗೊಂಡಿತು.

ಕಛೇರಿಯಲ್ಲಿ ನುಡಿಸಿದ ಕೃತಿಗಳು ಹೀಗಿದ್ದವು:
೧. ವಾತಾಪಿ - ಹಂಸಧ್ವನಿ - ಆದಿ - ಮುತ್ತುಸ್ವಾಮಿ ದೀಕ್ಷಿತರು
೨. ರಾಮಭಕ್ತಿ ಸಾಮ್ರಾಜ್ಯ - ಶುದ್ಧಬಂಗಾಳ - ಆದಿ - ತ್ಯಾಗರಾಜರು
೩. ಮೋಕ್ಷಮುಗಲದಾ - ಸಾರಮತಿ - ಆದಿ - ತ್ಯಾಗರಾಜರು
೪. ಜ್ಞಾನಮೊಸಗರಾದಾ - ಪೂರ್ವಿ ಕಲ್ಯಾಣಿ - ರೂಪಕ - ತ್ಯಾಗರಾಜರು
೫. ನಿರವಧಿ ಸುಖದ ನಿರ್ಮಲ ರೂಪ - ರವಿಚಂದ್ರಿಕೆ - ಆದಿ - ತ್ಯಾಗರಾಜರು
೬. ಅಖಿಲಾಂಡೇಶ್ವರಿ ರಕ್ಷಮಾಂ - ದ್ವಿಜಾವಂತಿ - ಆದಿ - ಮುತ್ತುಸ್ವಾಮಿ ದೀಕ್ಷಿತರು
೭. ರಘುವಂಶಸುತ - ಕದನಕುತೂಹಲ - ಆದಿ - ಪಟ್ಣಂ ಸುಬ್ರಹ್ಮಣ್ಯ ಅಯ್ಯರ್
೮. ಮೋಹನ ರಾಮ - ಮೋಹನ - ಆದಿ - ತ್ಯಾಗರಾಜರು
೯. ತಿರುಪತಿ ವೆಂಕಟರಮಣ ನಿನಗೇತಕೆ ಬಾರದೊ ಕರುಣ - ಖರಹರಪ್ರಿಯ - ಆದಿ - ಪುರಂದರ ದಾಸರು
೧೦. ವೈಷ್ಣವ ಜನತೋ - ಮಿಶ್ರ ಖಮಾಜ್ - ನರಸಿಂಹ ಮೆಹ್ತಾ
೧೧. ರಘುಪತಿ ರಾಘವ ರಾಜಾರಾಮ್ - ವಿಷ್ಣು ದಿಗಂಬರ್ ಪಲುಸ್ಕರ್
೧೨. ಇನ್ನು ದಯ ಬಾರದೇ ದಾಸನ ಮೇಲೆ - ಕಲ್ಯಾಣ ವಸಂತ - ಖಂಡಛಾಪು - ಪುರಂದರ ದಾಸರು
೧೩. ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದಾ - ತೋಡಿ - ರೂಪಕ - ಶ್ರೀಪಾದರಾಜರು
೧೪. ಭಾಗ್ಯದಾ ಲಕ್ಷ್ಮೀ ಬಾರಮ್ಮಾ - ಪುರಂದರ ದಾಸರು

|| ಶುಭಂ ||

Click on individual photos to enlarge.

Tags : 71st Ramanavami Music Festival, April-May 2009, Kote High School Grounds, Sri Ramaseva Mandali Chamarajpet Bangalore, Carnatic Classical Music, Dr Kadri Gopalanath, Vid. Kanyakumari, Vid. B Harikumar, Vid. N Amruth, Vid B Rajashekhar

1 comment:

  1. Nice commentary. Kadri yavaru pratee salavoo hamsa dhwaniyinda yaake shuru madtharo gottilla. Hechhagi sangeetha kacherigalu varnadinda shuru agthave. Dr Kadriyavarige abhinandanegalu...naanu miss madkonde..Kishore, UK.

    ReplyDelete